50 ಪೈಸೆಯ ಅಂಚೆ ಪತ್ರ – ನಮ್ಮ ಬಾಲ್ಯದ ಜೀವನಾಡಿ

siddaganga math post office

ಇಂದು ನಾವು ಒಂದು ಸಂದೇಶ ಕಳುಹಿಸಲು ಕೆಲವೇ ಸೆಕೆಂಡುಗಳು ಸಾಕು. ವಾಟ್ಸಪ್‌, ಟೆಲಿಗ್ರಾಮ್‌, ಇಮೇಲ್‌ — ಯಾವ ವೇದಿಕೆ ಬೇಕಾದರೂ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸಬಹುದು. ವಿಡಿಯೋ ಕಾಲ್ ಮೂಲಕ ದೂರದ ವ್ಯಕ್ತಿಯನ್ನು ನೋಡಬಹುದು. ಆದರೆ ಎರಡು ದಶಕಗಳ ಹಿಂದೆ ಸಂವಹನವೆಂದರೆ ಅದೊಂದು ನಿರೀಕ್ಷೆಯ ಪ್ರಯಾಣವಾಗಿತ್ತು. ಆ ನಿರೀಕ್ಷೆಗೆ ಜೀವ ನೀಡುತ್ತಿದ್ದದ್ದು ಒಂದು ಪುಟ್ಟ ನಸು ಹಳದಿ ಬಣ್ಣದ 50 ಪೈಸೆಯ ಅಂಚೆ ಪತ್ರ.

ಆ ಕಾಲದ ಪತ್ರ ಕೇವಲ ಕಾಗದದ ತುಂಡಲ್ಲ. ಅದು ಮನೆಯ ವಾಸನೆ, ಅಮ್ಮನ ಕಾಳಜಿ, ಅಪ್ಪನ ಸಲಹೆ, ತಮ್ಮ-ತಂಗಿಯ ಚಿಲಿಪಿತನ — ಇವೆಲ್ಲದರ ಸಂಗ್ರಹವಾಗಿತ್ತು.

ಮಠದ ಬದುಕು ಮತ್ತು ಪತ್ರಗಳ ಅವಶ್ಯಕತೆ

2004ರ ಸಮಯ. ನಾನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಐದನೇ ತರಗತಿ ಓದುತ್ತಿದ್ದೆ. ಆ ಕಾಲದಲ್ಲಿ ಮೊಬೈಲ್‌ಗಳು ಎಲ್ಲರ ಕೈಯಲ್ಲಿರಲಿಲ್ಲ. ಗ್ರಾಮೀಣ ಹಿನ್ನೆಲೆಯಿಂದ ಬಂದ ಸಾವಿರಾರು ವಿದ್ಯಾರ್ಥಿಗಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕುಟುಂಬದಿಂದ ದೂರವಿದ್ದು ಓದುವುದು ನಮ್ಮಿಗೆ ಹೊಸ ಅನುಭವ.

ಮಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಅಷ್ಟು ದೊಡ್ಡ ವ್ಯವಸ್ಥೆಯೊಳಗೆ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಲು ಏಕೈಕ ಮಾರ್ಗ ಅಂಚೆ ಪತ್ರವೇ ಆಗಿತ್ತು. ಮಠದ ಅಂಚೆ ಕಚೇರಿ ನಮ್ಮ ಬದುಕಿನ ಪ್ರಮುಖ ಕೇಂದ್ರವಾಗಿತ್ತು. ಅಲ್ಲಿ ಬರುವ ಪ್ರತಿಯೊಂದು ಪತ್ರವೂ ಯಾರಿಗೋ ಒಂದು ಹೃದಯದ ತುಂಡಾಗಿತ್ತು.

ಮನೆಯವರನ್ನು ಬಿಟ್ಟು ದೂರದಲ್ಲಿದ್ದ ವಿದ್ಯಾರ್ಥಿಗಳಿಗೆ ಪತ್ರವೇ ನೆಮ್ಮದಿಯ ಮದ್ದಾಗಿತ್ತು. ಕೆಲವೊಮ್ಮೆ ಮನಸ್ಸು ಬೇಸರಗೊಂಡಾಗ, ಪರೀಕ್ಷೆಯ ಒತ್ತಡ ಇರುವಾಗ, ಅಥವಾ ಆರೋಗ್ಯ ಸರಿ ಇಲ್ಲದಿದ್ದಾಗ — ಅಮ್ಮನ ಕೈಬರಹದ ಪತ್ರ ಮನಸ್ಸಿಗೆ ಶಾಂತಿ ನೀಡುತ್ತಿತ್ತು.
ಇದನ್ನೂ ಓದಿ: ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನೆನಪುಗಳು

siddaganga math post office

“ತೀರ್ಥರೂಪ ತಂದೆಯವರಿಗೆ…” — ಗೌರವದ ಭಾಷೆ

ಅಂದಿನ ಪತ್ರಗಳು ಒಂದು ನಿರ್ದಿಷ್ಟ ಶೈಲಿಯನ್ನು ಹೊಂದಿದ್ದವು.
“ತೀರ್ಥರೂಪ ತಂದೆಯವರಿಗೆ”,
“ಮಾತೋಶ್ರೀ ತಾಯಿಯವರಿಗೆ”,
“ಮಾತೃಸ್ವರೂಪಿ ಚಿಕ್ಕಮ್ಮ ಅವರಿಗೆ”,
“ಚಿರಂಜೀವಿ ತಮ್ಮನಿಗೆ” —

ಇಂತಹ ಸಾಲುಗಳಿಂದ ಆರಂಭವಾಗುತ್ತಿದ್ದ ಪತ್ರಗಳು ನಮ್ಮಲ್ಲಿ ಗೌರವ ಮತ್ತು ಸಂಸ್ಕಾರದ ಬಿತ್ತನೆ ಮಾಡುತ್ತಿದ್ದವು. ಹಿರಿಯರನ್ನು ಹೇಗೆ ಉದ್ದೇಶಿಸಬೇಕು, ಕಿರಿಯರಿಗೆ ಹೇಗೆ ಬರೆಯಬೇಕು ಎಂಬುದನ್ನು ಪತ್ರಗಳೇ ಕಲಿಸುತ್ತಿದ್ದವು.

ಆ ಪತ್ರಗಳಲ್ಲಿ ನೋವು ಇತ್ತು, ಸಾಂತ್ವನ ಇತ್ತು, ಸಂತೋಷ ಇತ್ತು, ಆಶೀರ್ವಾದ ಇತ್ತು. “ಓದಿನಲ್ಲಿ ಗಮನಕೊಡು”, “ಆರೋಗ್ಯ ಕಾಪಾಡಿಕೋ”, “ಹಣ ಕಳುಹಿಸಿದ್ದೇವೆ” — ಇಂತಹ ಸರಳ ಸಾಲುಗಳಲ್ಲೇ ಅಪಾರ ಪ್ರೀತಿ ಅಡಗಿರುತ್ತಿತ್ತು.

siddaganga math post office

ವಿಳಾಸದ ಸವಾಲು – ಅಂಚೆಯಣ್ಣನ ಕಷ್ಟ

ಸಾವಿರಾರು ವಿದ್ಯಾರ್ಥಿಗಳಿರುವ ಮಠದಲ್ಲಿ ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪತ್ರಗಳು ಬರುತ್ತಿದ್ದವು. ಅವುಗಳನ್ನು ಸರಿಯಾಗಿ ತಲುಪಿಸುವುದು ಅಂಚೆ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು.

ಮಠದಲ್ಲಿ ಪ್ರಾಥಮಿಕ ಶಾಲೆ ಮತ್ತು ಎರಡು ಪ್ರೌಢಶಾಲೆಗಳು ಇದ್ದವು. ಒಂದರ ಹೆಸರು “ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಪ್ರೌಢಶಾಲೆ (SSRHS)” ಎಂದರೆ ಮತ್ತೊಂದು “ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಉನ್ನತ ಪ್ರೌಢಶಾಲೆ (SSRHSS)” ಎಂದು ಬಹಳ ಸಮಾನವಾಗಿತ್ತು. ಒಂದು ‘S’ ಹೆಚ್ಚು ಕಡಿಮೆ ಆದರೂ ವಿಳಾಸ ತಪ್ಪಾಗುವ ಸಾಧ್ಯತೆ ಇತ್ತು.

ಹಳ್ಳಿಗಳಲ್ಲಿದ್ದ ಪೋಷಕರು ವಿಳಾಸ ಬರೆಯುವಲ್ಲಿ ಸಂಕಷ್ಟ ಅನುಭವಿಸುತ್ತಿದ್ದರು. ಬಹಳಷ್ಟು ಪತ್ರಗಳಲ್ಲಿ “ಹುಡುಗನ ಹೆಸರು – ಸಿದ್ಧಗಂಗಾ ಮಠ” ಅಷ್ಟೇ ಬರೆಯಲಾಗುತ್ತಿತ್ತು. ಆದರೆ ಅಷ್ಟು ದೊಡ್ಡ ಸಂಸ್ಥೆಯಲ್ಲಿ ಆ ವಿದ್ಯಾರ್ಥಿಯನ್ನು ಹುಡುಕುವುದು ಅಸಾಧ್ಯ ಆಗುತ್ತಿತ್ತು.
ಇದನ್ನೂ ಓದಿ: ಹುಬ್ಬಳ್ಳಿಯ ಮೂರುಸಾವಿರ ಮಠದ ಇತಿಹಾಸ

siddaganga math post office

ಬಾಕ್ಸ್ ವ್ಯವಸ್ಥೆ – ನಮ್ಮ ಹುಡುಕಾಟ

ಪತ್ರ ವಿತರಣೆಯನ್ನು ಸುಲಭಗೊಳಿಸಲು ಪ್ರತಿ ಶಾಲೆ ಮುಂದೆ ವಿಭಾಗವಾರು ಬಾಕ್ಸ್‌ಗಳನ್ನು ಇಡಲಾಗಿತ್ತು. ಪ್ರತಿ ತರಗತಿಗೆ A ಇಂದ I ವರೆಗೆ ವಿಭಾಗಗಳಿದ್ದು, ಒಂದೊಂದು ವಿಭಾಗದಲ್ಲಿ 50-60 ವಿದ್ಯಾರ್ಥಿಗಳಿದ್ದರು.

ಅಂಚೆಯಣ್ಣ ಪತ್ರಗಳನ್ನು ಈ ಬಾಕ್ಸ್‌ಗಳಲ್ಲಿ ಹಾಕುತ್ತಿದ್ದರು. ನಾವು ಪ್ರತಿದಿನ ಅಲ್ಲಿ ಹೋಗಿ ನಮ್ಮ ಹೆಸರಿನ ಪತ್ರ ಹುಡುಕಿಕೊಳ್ಳುತ್ತಿದ್ದೆವು. ಯಾವಾಗಲೂ ಒಂದು ನಿರೀಕ್ಷೆ — “ಇಂದು ನನ್ನ ಹೆಸರು ಇದೆಯೇ?”

ಪೂರ್ಣ ವಿಳಾಸವಿಲ್ಲದ ಕೆಲವು ಪತ್ರಗಳು ಕೊನೆಯ ಬಾಕ್ಸ್‌ನಲ್ಲಿ ಉಳಿಯುತ್ತಿದ್ದರು. ಭಾನುವಾರಗಳಲ್ಲಿ ನಾವು ಆ ಪತ್ರಗಳನ್ನು ಓದಿ, ಒಳಗಿನ ಮಾಹಿತಿಯ ಆಧಾರದ ಮೇಲೆ ನಿಜವಾದ ವ್ಯಕ್ತಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದೆವು. “ನಮ್ಮ ಊರು ಹಾಸನ”, “ನಿನ್ನ ಅಕ್ಕ ಮದುವೆ ನಿಶ್ಚಯವಾಗಿದೆ” ಇಂತಹ ವಿವರಗಳಿಂದ ನಾವು ಗುರುತು ಹಿಡಿಯುತ್ತಿದ್ದೆವು. ಇದು ಒಂದು ವಿಶಿಷ್ಟ ಅನುಭವ.

siddaganga math post office

ಬರವಣಿಗೆ ಕಲಿಸಿದ ಪತ್ರಗಳು

ಪತ್ರ ಬರೆಯುವಾಗ ನಾವು ಕಾಗುಣಿತ ದೋಷ ಮಾಡುತ್ತಿದ್ದೆವು. ವಾಕ್ಯ ರಚನೆ ತಪ್ಪುತ್ತಿತ್ತು. ಪದಗಳಿಗಾಗಿ ಯೋಚಿಸುತ್ತಿದ್ದೆವು. ಆದರೆ ಇದೇ ಪ್ರಕ್ರಿಯೆ ನಮ್ಮ ಭಾಷಾ ಜ್ಞಾನವನ್ನು ಹೆಚ್ಚಿಸಿತು.

ನಮ್ಮ ತರಗತಿಯಲ್ಲಿ ಕೆಲವರು ಅತ್ಯಂತ ಸುಂದರ ಕೈಬರಹಕ್ಕೆ ಹೆಸರಾಗಿದ್ದರು. ಅವರಿಂದ ಕಾಡಿ ಬೇಡಿ ನಮ್ಮ ಪತ್ರಗಳನ್ನು ಬರೆಸುತ್ತಿದ್ದೆವು. ರಜೆ ವೇಳೆ ಮನೆಗೆ ಹೋದಾಗ ನಮ್ಮ ಹಳೆಯ ಪತ್ರಗಳನ್ನು ಓದಿದರೆ ನಗು ಬರುತ್ತಿತ್ತು. ಆದರೆ ಆ ಬರವಣಿಗೆಯಲ್ಲಿದ್ದ ನಿಜವಾದ ಭಾವನೆ ಮರೆಯಾಗಿರಲಿಲ್ಲ.

ಇಂದಿನ ಸಂಕ್ಷಿಪ್ತ ಸಂದೇಶಗಳಲ್ಲಿ ಇಷ್ಟು ಪದಗಳ ಬಳಕೆ ಕಾಣುವುದಿಲ್ಲ. ಪತ್ರಗಳು ನಮ್ಮ ಪದಸಂಪತ್ತನ್ನು ಹೆಚ್ಚಿಸಿದವು. ಬರವಣಿಗೆಯ ಶೈಲಿ ಬೆಳೆಸಿದವು.

‘ಮನಿ ಆರ್ಡರ್’ – ಒಂದು ವಿಶೇಷ ದಿನ

ಪತ್ರಗಳ ಜೊತೆಗೆ ‘ಮನಿ ಆರ್ಡರ್’ ಕೂಡ ಮಹತ್ವದ್ದಾಗಿತ್ತು. ಮನೆದಿಂದ ಬಂದ ಹಣವನ್ನು ಪಡೆಯಲು ಗುರುತಿನ ಪರಿಶೀಲನೆ ನಡೆಯುತ್ತಿತ್ತು. ತಪ್ಪು ವ್ಯಕ್ತಿಗೆ ಹಣ ಹೋಗಬಾರದು ಎಂಬ ಕಾರಣದಿಂದ ಪೋಸ್ಟ್ ಮಾಸ್ಟರ್ ಸಾಕಷ್ಟು ಪ್ರಶ್ನೆಗಳು ಕೇಳುತ್ತಿದ್ದರು.

ಮನಿ ಆರ್ಡರ್ ಬಂದವರ ಹೆಸರನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗುತ್ತಿತ್ತು. ಸಂಜೆಯ ಪ್ರಾರ್ಥನೆಯಲ್ಲಿ ಹೆಸರು ಘೋಷಿಸಲಾಗುತ್ತಿತ್ತು. ಹೆಸರು ಕೇಳಿದ ಕ್ಷಣದ ಸಂತೋಷ ವರ್ಣಿಸಲಾಗದು.

ನಾವು ಗುರುತಿನ ಚೀಟಿ ತೆಗೆದುಕೊಂಡು ಹೋಗಿ, “ಯಾರು ಕಳುಹಿಸಿದ್ದಾರೆ?”, “ಎಲ್ಲಿಂದ ಕಳುಹಿಸಿದ್ದಾರೆ?” ಎಂಬ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಮಾತ್ರ ಹಣ ಕೈಗೆ ಸಿಗುತ್ತಿತ್ತು. ಅದು ಒಂದು ವಿಧದ ಜವಾಬ್ದಾರಿಯ ಪಾಠವಾಗಿತ್ತು.
ಇದನ್ನೂ ಓದಿ: ಕೊಪ್ಪಳ ಗವಿಸಿದ್ದೇಶ್ವರ ಮಠದ ಇತಿಹಾಸ

siddaganga math post office

ತಂತ್ರಜ್ಞಾನ ಮತ್ತು ಕಳೆದುಹೋದ ನಿರೀಕ್ಷೆ

ಇಂದು ತಂತ್ರಜ್ಞಾನ ಬಹಳ ಮುಂದೆ ಬಂದಿದೆ. ಕ್ಷಣಾರ್ಧದಲ್ಲಿ ಸಂಪರ್ಕ ಸಾಧ್ಯ. ಆದರೆ ಕಾಯುವಿಕೆಯ ಸವಿನೆನಪು ಇಲ್ಲ. ಪತ್ರ ಬರುವ ನಿರೀಕ್ಷೆಯಲ್ಲಿ ಬಾಕ್ಸ್ ಮುಂದೆ ನಿಲ್ಲುವ ಆ ಕ್ಷಣಗಳು ಈಗ ಕಾಣುವುದಿಲ್ಲ.

ಮೊಬೈಲ್ ಸಂದೇಶಗಳು ತ್ವರಿತ. ಆದರೆ ಪತ್ರಗಳಂತೆ ಭಾವನೆಗಳ ಸಂಪೂರ್ಣತೆ ಇಲ್ಲ. ಕಾಗದದ ಮೇಲೆ ಬರೆಯುವಾಗ ಮನಸ್ಸಿನ ಆಳವನ್ನು ಅಭಿವ್ಯಕ್ತಿಸುವ ಅವಕಾಶ ಹೆಚ್ಚು.

ಅಂಚೆಯಣ್ಣನ ಬಗ್ಗೆ ಗೌರವ

50 ಪೈಸೆಯ ಪತ್ರವನ್ನು ಸರಿಯಾದ ವಿಳಾಸಕ್ಕೆ ತಲುಪಿಸಲು ಅಂಚೆ ಸಿಬ್ಬಂದಿ ಎಷ್ಟೊಂದು ಶ್ರಮ ವಹಿಸುತ್ತಿದ್ದರು ಎಂಬುದು ಈಗ ಅರ್ಥವಾಗುತ್ತದೆ. ಅವರ ಪರಿಶ್ರಮದಿಂದಲೇ ನಮ್ಮ ಭಾವನೆಗಳು ಮನೆ ತಲುಪುತ್ತಿದ್ದವು. ಅವರು ಕೇವಲ ಅಂಚೆ ವಿತರಕರು ಅಲ್ಲ. ಅವರು ಸಂಬಂಧಗಳ ಸೇತುವೆ ನಿರ್ಮಿಸಿದವರು.

siddaganga math post office

ಇಂದು ನಾವು ವೇಗದ ಯುಗದಲ್ಲಿ ಬದುಕುತ್ತಿದ್ದೇವೆ. ಆದರೆ 90ರ ದಶಕ ಮತ್ತು 2000ರ ಆರಂಭದ ಆ ಪತ್ರಗಳ ಯುಗ ನಮ್ಮ ಬದುಕಿಗೆ ವಿಭಿನ್ನ ಮೌಲ್ಯ ನೀಡಿದೆ. ಅದು ನಮ್ಮ ಭಾಷೆಯನ್ನು ಬೆಳೆಸಿತು. ನಮ್ಮ ಸಹನೆಯನ್ನು ಹೆಚ್ಚಿಸಿತು. ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿತು.

ನಿಮ್ಮ ಬದುಕಿನಲ್ಲಿ ಅಂಚೆ ಪತ್ರಗಳ ನೆನಪುಗಳಿವೆಯೇ? ನೀವು ಯಾರಿಗಾದರೂ ಪತ್ರ ಬರೆದಿದ್ದೀರಾ? ಮನಿ ಆರ್ಡರ್ ಬಂದ ದಿನದ ಸಂತೋಷವನ್ನು ಅನುಭವಿಸಿದ್ದೀರಾ? ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ಬಹುಶಃ ನಾವು ಮತ್ತೆ ಆ ನಸು ಹಳದಿ ಪತ್ರಗಳ ಕಾಲಕ್ಕೆ ಕ್ಷಣಕಾಲ ಹಿಂತಿರುಗಬಹುದು.

ನವೀನ ಹಳೆಯದು